Jonathan placing his robe on David while Saul watches from a shadowed doorway

1 ಸಮುಯೇಲ 18

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ದಾವೀದನ ವಿಜಯಗಳು ಸಾರ್ವಜನಿಕ ಆಚರಣೆ ಮತ್ತು ಯೋನಾತಾನನೊಂದಿಗೆ ಆಳವಾದ ಒಡಂಬಡಿಕೆಯ ಸ್ನೇಹವನ್ನು ಗಳಿಸುತ್ತವೆ. ಸೌಲನು ಜನಪ್ರಿಯತೆಯನ್ನು ಬೆದರಿಕೆಯಾಗಿ ಕಂಡು, ಅಸೂಯೆಪಟ್ಟು, ವಿವಾಹ ಮತ್ತು ಅಪಾಯಕಾರಿ ಸೇವೆಯನ್ನು ಸಹ ದಾವೀದನನ್ನು ನಾಶಮಾಡುವ ಪ್ರಯತ್ನಗಳಾಗಿ ಬಳಸಿ ಪದೇ ಪದೇ ಕುತಂತ್ರ ಮಾಡುತ್ತಾನೆ.
ಸ್ನೇಹಅಸೂಯೆಯಶಸ್ಸುಬೆದರಿಕೆ
1ದಾವೀದನು ಸೌಲನ ಸಂಗಡ ಮಾತನಾಡಿ ಮುಗಿಸಿದ ಮೇಲೆ, ಯೋನಾತಾನನ ಪ್ರಾಣವು ದಾವೀದನ ಪ್ರಾಣದ ಸಂಗಡ ಒಂದಾಯಿತು. ಯೋನಾತಾನನು ಅವನನ್ನು ತನ್ನ ಪ್ರಾಣದ ಹಾಗೆಯೇ ಪ್ರೀತಿಮಾಡಿದನು.
2ಇದಲ್ಲದೆ ಸೌಲನು ಆ ದಿವಸ ಅವನನ್ನು ತನ್ನ ಬಳಿಯಲ್ಲಿ ಇಟ್ಟುಕೊಂಡನು. ತಿರುಗಿ ಅವನ ತಂದೆಯ ಮನೆಗೆ ಹೋಗಗೊಡಿಸಲಿಲ್ಲ.
3ಯೋನಾತಾನನು ತನ್ನ ಪ್ರಾಣದ ಹಾಗೆ ದಾವೀದನನ್ನು ಪ್ರೀತಿಮಾಡಿದ್ದರಿಂದ, ಒಬ್ಬರಿಗೊಬ್ಬರು ಒಡಂಬಡಿಕೆ ಮಾಡಿಕೊಂಡರು.
4ಆಗ ಯೋನಾತಾನನು ತೊಟ್ಟುಕೊಂಡಿದ್ದ ನಿಲುವಂಗಿಯನ್ನು ತೆಗೆದು ಅದನ್ನೂ, ತನ್ನ ವಸ್ತ್ರಗಳನ್ನೂ, ಖಡ್ಗವನ್ನೂ, ಬಿಲ್ಲನ್ನೂ, ನಡುಕಟ್ಟನ್ನೂ ದಾವೀದನಿಗೆ ಕೊಟ್ಟನು.
5ಸೌಲನು ದಾವೀದನನ್ನು ಎಲ್ಲಿಗೆ ಕಳುಹಿಸಿದರೂ, ಅಲ್ಲಿಗೆ ಹೋಗಿ ಅವನು ಎಲ್ಲವನ್ನು ವಿವೇಕದಿಂದ ಬಹು ಯಶಸ್ವಿಯಾಗಿ ಮಾಡುತ್ತಿದ್ದನು. ಆದ್ದರಿಂದ ಸೌಲನು ಅವನನ್ನು ಸೈನ್ಯದ ಮೇಲೆ ಅಧಿಕಾರಿಯಾಗಿ ನೇಮಿಸಿದನು. ಇದು ಸಮಸ್ತ ಜನರಿಗೂ, ಸೌಲನ ಸಮಸ್ತ ಸೇವಕರಿಗೂ ಮೆಚ್ಚಿಕೆಯಾಗಿತ್ತು.
6ದಾವೀದನು ಫಿಲಿಷ್ಟಿಯರನ್ನು ಹೊಡೆದು ಜನರಸಹಿತವಾಗಿ ಬರುವಾಗ, ಇಸ್ರಾಯೇಲರ ಸಮಸ್ತ ಪಟ್ಟಣಗಳಿಂದ ಸ್ತ್ರೀಯರು ಹೊರಟು ದಮ್ಮಡಿಗಳಿಂದಲೂ ಸಂಗೀತವಾದ್ಯಗಳಿಂದಲೂ ಸಂತೋಷದಿಂದಲೂ ಹಾಡುತ್ತಾ ನಾಟ್ಯವಾಡುತ್ತಾ ಅರಸನಾದ ಸೌಲನನ್ನು ಎದುರುಗೊಳ್ಳಲು ಬಂದರು.
7ಆ ಸ್ತ್ರೀಯರು ಒಬ್ಬರಿಗೊಬ್ಬರು, “ಸೌಲನು ಸಾವಿರಗಳಷ್ಟು ಕೊಂದನು, ದಾವೀದನು ಹತ್ತು ಸಾವಿರಗಳಷ್ಟು ಕೊಂದನು,” ಎಂದು ಹಾಡಿದರು.
8ಇದರಿಂದ ಸೌಲನಿಗೆ ಬಹು ಕೋಪವಾಯಿತು. ಆ ಹಾಡಿನಿಂದ ಅವನಿಗೆ ಬಹುಬೇಸರವಾಯಿತು. “ಇವರು ದಾವೀದನಿಗೆ ಹತ್ತು ಸಾವಿರಗಳಷ್ಟು ಎಂದು ಹಾಡಿದ್ದಾರೆ; ನನಗೆ ಸಾವಿರಗಳಷ್ಟೇ ಎಂದು ಹಾಡಿದ್ದಾರೆ; ಹಾಗಾದರೆ, ಅವನಿಗೆ ರಾಜ್ಯವಲ್ಲದೆ ಇನ್ನು ಆಗಬೇಕಾದದ್ದೇನು?” ಎಂದುಕೊಂಡನು.
9ಆ ದಿವಸ ಮೊದಲುಗೊಂಡು ಸೌಲನು ದಾವೀದನ ಮೇಲೆ ಮತ್ಸರದ ಕಣ್ಣಿಟ್ಟನು.
10ಮಾರನೆಯ ದಿವಸದಲ್ಲಿ ದೇವರಿಂದ ಅನುಮತಿಸಿದ ದುರಾತ್ಮವು ಸೌಲನ ಮೇಲೆ ಇಳಿಯಿತು. ಅವನು ಬುದ್ಧಿಗೆಟ್ಟು ಮನೆಯಲ್ಲಿ ಕೂಗಾಡತೊಡಗಿದನು. ಆಗ ದಾವೀದನು ಪ್ರತಿದಿನ ಮಾಡುತ್ತಿದ್ದ ಹಾಗೆಯೇ ತನ್ನ ಕೈಯಿಂದ ಕಿನ್ನರಿಯನ್ನು ಬಾರಿಸುತ್ತಿದ್ದನು. ಆದರೆ ಸೌಲನ ಕೈಯಲ್ಲಿ ಈಟಿಯು ಇತ್ತು.
11ಆಗ ಸೌಲನು, “ದಾವೀದನನ್ನು ಗೋಡೆಗೆ ಹತ್ತಿಕೊಳ್ಳುವ ಹಾಗೆ ಹೊಡೆಯುವೆನು,” ಎಂದು ಈಟಿಯನ್ನು ಎಸೆದನು. ದಾವೀದನು ಎರಡು ಸಾರಿ ಅವನ ಸಮ್ಮುಖದಿಂದ ತಪ್ಪಿಸಿಕೊಂಡನು.
12ಸೌಲನು ದಾವೀದನಿಗೆ ಭಯಪಟ್ಟನು. ಏಕೆಂದರೆ ಯೆಹೋವ ದೇವರು ಅವನ ಸಂಗಡ ಇದ್ದರು. ಸೌಲನ ಕಡೆಯಿಂದ ಹೊರಟು ಹೋಗಿದ್ದರು.
13ಆದ್ದರಿಂದ ಸೌಲನು ಅವನನ್ನು ತನ್ನ ಬಳಿಯಿಂದ ಹೊರಡಿಸಿಬಿಟ್ಟು, ಸಾವಿರ ಜನರಿಗೆ ಪ್ರಧಾನನ್ನಾಗಿ ಮಾಡಿದನು. ಹಾಗೆಯೇ ಅವನು ದಳಪತಿಯಾಗಿ ಸೈನಿಕರನ್ನು ಕರೆದುಕೊಂಡು ಯುದ್ಧಕ್ಕೆ ಹೋಗುತ್ತಾ ಬರುತ್ತಾ ಇದ್ದನು.
14ಯೆಹೋವ ದೇವರು ದಾವೀದನ ಸಂಗಡ ಇದ್ದುದರಿಂದ ಅವನು ತನ್ನ ಸಕಲ ಮಾರ್ಗಗಳಲ್ಲಿ ವಿವೇಕದಿಂದ ವರ್ತಿಸಿ ಜಯಶಾಲಿಯಾಗುತ್ತಿದ್ದನು.
15ಅವನು ಜಯಶಾಲಿಯಾಗುತ್ತಿದ್ದದ್ದನ್ನು ಸೌಲನು ಕಂಡು ಅವನಿಗೆ ಭಯಪಟ್ಟಿದ್ದನು.
16ಆದರೆ ಇಸ್ರಾಯೇಲ್ ಜನರೂ ಯೆಹೂದ ಜನರೂ ದಾವೀದನು ತಮ್ಮ ಮುಂದೆ ಹೊರಟು ಹೋಗುತ್ತಾ ಬರುತ್ತಾ ಇರುವುದರಿಂದ ಅವನನ್ನು ಪ್ರೀತಿ ಮಾಡಿದರು.
17ಆಗ ಸೌಲನು, “ನಾನು ಅವನ ಮೇಲೆ ವಿರೋಧವಾಗಿ ಕೈಯೆತ್ತಬಾರದು. ಫಿಲಿಷ್ಟಿಯರು ಅದನ್ನು ಮಾಡಲಿ,” ಎಂದು ತನ್ನಷ್ಟಕ್ಕೆ ಅಂದುಕೊಂಡು ದಾವೀದನಿಗೆ, “ನನ್ನ ಹಿರಿಯ ಮಗಳಾದ ಮೇರಬಳನ್ನು ನಿನಗೆ ಹೆಂಡತಿಯಾಗಿ ಕೊಡುವೆನು, ನೀನು ನನಗೋಸ್ಕರ ಪರಾಕ್ರಮಶಾಲಿಯಾಗಿದ್ದು ಯೆಹೋವ ದೇವರ ಯುದ್ಧಗಳನ್ನು ನಡೆಸು,” ಎಂದನು.
18ದಾವೀದನು ಸೌಲನಿಗೆ, “ಅರಸನಿಗೆ ಅಳಿಯನಾಗಿರುವುದಕ್ಕೆ ನಾನೆಷ್ಟರವನು? ನನ್ನ ಕುಟುಂಬ ಎಷ್ಟರದು? ಇಸ್ರಾಯೇಲಿನಲ್ಲಿ ನನ್ನ ತಂದೆಯ ಗೋತ್ರವು ಎಷ್ಟು ಮಾತ್ರವು?” ಎಂದನು.
19ಸೌಲನು ತನ್ನ ಮಗಳಾದ ಮೇರಬಳನ್ನು ದಾವೀದನಿಗೆ ಮದುವೆಮಾಡಿಕೊಡುವ ಸಮಯ ಬಂದಾಗ, ಅವಳನ್ನು ಮೆಹೋಲದವನಾದ ಅದ್ರಿಯೇಲ್ ಎಂಬವನಿಗೆ ಕೊಟ್ಟು ಮದುವೆಮಾಡಿದನು.
20ಸೌಲನ ಮತ್ತೊಬ್ಬ ಮಗಳಾದ ಮೀಕಲಳು ದಾವೀದನನ್ನು ಪ್ರೀತಿಸಿದಳು. ಅದು ಸೌಲನಿಗೆ ತಿಳಿದುಬಂದಾಗ, ಆ ಕಾರ್ಯವು ಅವನಿಗೆ ಮೆಚ್ಚಿಕೆಯಾಯಿತು.
21“ಅವನಿಗೆ ಉರುಲಾಗಿರುವ ಹಾಗೆಯೂ, ಫಿಲಿಷ್ಟಿಯರ ಕೈ ಅವನ ಮೇಲೆ ಬರುವ ಹಾಗೆಯೂ ಇವಳನ್ನು ಅವನಿಗೆ ಕೊಡುವೆನು,” ಎಂದುಕೊಂಡನು. ಆದ್ದರಿಂದ ಸೌಲನು ದಾವೀದನಿಗೆ, “ನೀನು ನನ್ನ ಅಳಿಯನಾಗಲು ಎರಡನೆಯ ಅವಕಾಶ,” ಎಂದನು.
22ಸೌಲನು ತನ್ನ ಸೇವಕರಿಗೆ, “ನೀವು ದಾವೀದನ ಸಂಗಡ ಅಂತರಂಗವಾಗಿ ಮಾತನಾಡಿ, ಇಗೋ, ಅರಸನು ನಿನ್ನ ಮೇಲೆ ಪ್ರೀತಿಯುಳ್ಳವನಾಗಿದ್ದಾನೆ; ಈಗ ನೀನು ಅರಸನಿಗೆ ಅಳಿಯನಾಗೆಂದು, ಹೇಳಿರಿ,” ಎಂದು ಆಜ್ಞಾಪಿಸಿದನು.
23ಹಾಗೆಯೇ ಸೌಲನ ಸೇವಕರು ಈ ಮಾತುಗಳನ್ನು ದಾವೀದನ ಕಿವಿಗಳಲ್ಲಿ ಹೇಳಿದರು. ಆದರೆ ದಾವೀದನು, “ನಾನು ದರಿದ್ರನೂ ಅಲ್ಪನೂ ಆಗಿರುವಾಗ, ನಾನು ಅರಸನಿಗೆ ಅಳಿಯನಾಗುವುದು ಅಷ್ಟು ಸಾಧಾರಣ ಸಂಗತಿಯೆಂದು ನೆನಸುತ್ತೀರೋ?” ಎಂದನು.
24ಆಗ ಸೌಲನ ಸೇವಕರು ಸೌಲನಿಗೆ, ದಾವೀದನು ಈ ಪ್ರಕಾರವಾಗಿ ಮಾತನಾಡಿದನೆಂದು ಹೇಳಿದರು.
25ಆದರೆ ಸೌಲನು ದಾವೀದನನ್ನು ಫಿಲಿಷ್ಟಿಯರ ಕೈಯಿಂದ ಬೀಳಮಾಡಬೇಕೆಂದು ನೆನಸಿ ತನ್ನ ಸೇವಕರಿಗೆ, “ನೀವು ದಾವೀದನಿಗೆ ಅರಸನು ಯಾವ ತೆರವನ್ನು ಅಪೇಕ್ಷಿಸದೆ, ತನ್ನ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸುವ ಹಾಗೆ ನೂರು ಮಂದಿ ಫಿಲಿಷ್ಟಿಯರ ಮುಂದೊಗಲನ್ನು ಅಪೇಕ್ಷಿಸುತ್ತಾನೆಂದು ಹೇಳಿರಿ,” ಎಂದನು.
26ಹಾಗೆಯೇ ಅವನ ಸೇವಕರು ದಾವೀದನಿಗೆ ಈ ಮಾತುಗಳನ್ನು ತಿಳಿಸಿದಾಗ, ಅರಸನಿಗೆ ಅಳಿಯನಾಗುವುದು ಅವನಿಗೆ ಚೆನ್ನಾಗಿ ಕಾಣಿಸಿತು.
27ಆದ್ದರಿಂದ ನೇಮಿಸಿದ ದಿವಸಗಳು ಈಡೇರುವುದಕ್ಕಿಂತ ಮುಂಚೆ ದಾವೀದನು ಎದ್ದು, ತನ್ನ ಜನರನ್ನು ಕರಕೊಂಡು ಹೋಗಿ, ಫಿಲಿಷ್ಟಿಯರಲ್ಲಿ ಇನ್ನೂರು ಜನರನ್ನು ಹೊಡೆದು, ಅವರ ಮುಂದೊಗಲುಗಳನ್ನು ತಂದು, ತಾನು ಅರಸನಿಗೆ ಅಳಿಯನಾಗುವ ಹಾಗೆ ಅವುಗಳನ್ನು ಅರಸನಿಗೆ ಒಪ್ಪಿಸಿದನು. ಆಗ ಸೌಲನು ತನ್ನ ಪುತ್ರಿಯಾದ ಮೀಕಲಳನ್ನು ಅವನಿಗೆ ಮದುವೆಮಾಡಿಕೊಟ್ಟನು.
28ಸೌಲನು, ಯೆಹೋವ ದೇವರು ದಾವೀದನ ಸಂಗಡ ಇದ್ದಾರೆಂದೂ, ತನ್ನ ಮಗಳಾದ ಮೀಕಲಳು ಅವನನ್ನು ಪ್ರೀತಿ ಮಾಡಿದ್ದಳೆಂದು ತಿಳಿದುಕೊಂಡನು.
29ಸೌಲನು ದಾವೀದನಿಗೋಸ್ಕರ ಇನ್ನೂ ಹೆಚ್ಚಾಗಿ ಭಯಪಟ್ಟನು. ಸೌಲನು ದಾವೀದನಿಗೆ ಜೀವಮಾನವೆಲ್ಲಾ ಶತ್ರುವಾಗಿದ್ದನು.
30ಫಿಲಿಷ್ಟಿಯರ ಪ್ರಧಾನರು ಯುದ್ಧಕ್ಕೆ ಬರುತ್ತಿದ್ದರು. ಅವರು ಹೊರಟು ಬಂದಾಗಲೆಲ್ಲಾ ದಾವೀದನು ಸೌಲನ ಸಮಸ್ತ ಸೇನಾಪತಿಗಳಿಗಿಂತ ಅತ್ಯಧಿಕ ಜಯಶೀಲನಾಗಿ ಹಿಂದಿರುಗುತ್ತಿದ್ದನು. ಆದ್ದರಿಂದ ಅವನ ಹೆಸರು ಬಹು ಪ್ರಸಿದ್ಧವಾಯಿತು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.