
1 ಕೊರಿಂಥದವರಿಗೆ 5
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಪೌಲನು ಸಹಿಸಲ್ಪಟ್ಟ ಲೈಂಗಿಕ ಅಪರಾಧವನ್ನು ಎದುರಿಸಿ, ಹೆಮ್ಮೆಪಡುವ ಬದಲು ಪಶ್ಚಾತ್ತಾಪವಿಲ್ಲದ ನಡತೆಯನ್ನು ಸಂಬೋಧಿಸುವಂತೆ ಸಭೆಗೆ ಆಜ್ಞಾಪಿಸುತ್ತಾನೆ. ಹಳೆಯ ಹುಳಿಯನ್ನು ತೆಗೆಯುವ ಚಿತ್ರವು ಸಮುದಾಯವನ್ನು ನಿಷ್ಕಪಟತೆ, ಸತ್ಯ ಮತ್ತು ಜವಾಬ್ದಾರಿಯುತ ಆಂತರಿಕ ಹೊಣೆಗಾರಿಕೆಯ ಕಡೆಗೆ ಕರೆಯುತ್ತದೆ.
ಹೊಣೆಗಾರಿಕೆಸಭೆಯ ಶಿಸ್ತುಶುದ್ಧತೆನಿಷ್ಕಪಟತೆ
1ಯೆಹೂದ್ಯರಲ್ಲದವರಲ್ಲಿ ನಡೆಯದೇ ಇರುವಂಥ ಅನೈತಿಕತೆ ನಿಮ್ಮಲ್ಲಿದೆಯೆಂದು ವಾಸ್ತವವಾಗಿ ವರದಿ ಬಂದಿದೆ: ಒಬ್ಬನು ತನ್ನ ತಂದೆಯ ಹೆಂಡತಿಯನ್ನು ಇಟ್ಟುಕೊಂಡಿದ್ದಾನಂತೆ.
2ಹೀಗಿದ್ದರೂ ಗರ್ವಪಡುತ್ತಿದ್ದೀರಲ್ಲಾ! ನೀವು ದುಃಖಪಟ್ಟು, ಈ ಕಾರ್ಯ ಮಾಡಿದವನನ್ನು ನಿಮ್ಮೊಳಗಿಂದ ಬಹಿಷ್ಕರಿಸಬೇಕಲ್ಲವೇ?
3ನಾನು ಸ್ವತಃ ನಿಮ್ಮ ಮಧ್ಯದಲ್ಲಿ ಇರದಿದ್ದರೂ ಆತ್ಮದಲ್ಲಿ ನಿಮ್ಮೊಂದಿಗಿದ್ದೇನೆ. ಈ ಕಾರ್ಯಮಾಡಿದವನ ಮೇಲೆ ಆಗಲೇ ಹತ್ತಿರವಿದ್ದವನಂತೆ ನಮಗೆ ಕರ್ತ ಆಗಿರುವ ಯೇಸುವಿನ ಹೆಸರಿನಲ್ಲಿ ತೀರ್ಪುಮಾಡಿದ್ದೇನೆ.
4ನೀವು ಕರ್ತ ಯೇಸುವಿನ ಹೆಸರಿನಲ್ಲಿ ಸಭೆಯಾಗಿ ಬಂದು ಸೇರಿದಾಗ, ನಾನೂ ಆತ್ಮದಲ್ಲಿ ನಿಮ್ಮೊಂದಿಗಿದ್ದು ನಮಗೆ ಕರ್ತ ಆಗಿರುವ ಯೇಸುವಿನ ಸಾನಿಧ್ಯ ಶಕ್ತಿಯೊಂದಿರುವಾಗ,
5ಕರ್ತ ಯೇಸುವಿನ ಪುನರಾಗಮನ ದಿನದಲ್ಲಿ ಆ ಮನುಷ್ಯನ ಆತ್ಮವು ರಕ್ಷಣೆ ಹೊಂದುವಂತೆಯೂ ಅವನ ಪಾಪಭರಿತ ಶರೀರವು ನಾಶವಾಗುವಂತೆಯೂ ಅವನನ್ನು ಸೈತಾನನಿಗೆ ಒಪ್ಪಿಸಿ ಬಿಡುತ್ತೇನೆ.
6ನೀವು ಜಂಬ ಕೊಚ್ಚಿಕೊಳ್ಳುವುದು ಸರಿಯಲ್ಲ. ಸ್ವಲ್ಪ ಹುಳಿ ಕಲಸಿದರೆ ಕಣಕವೆಲ್ಲಾ ಹುಳಿಯಾಗುತ್ತದೆಂಬುದು ನಿಮಗೆ ತಿಳಿಯದೋ?
7ಹೊಸ ಕಣಕವಾಗುವಂತೆ ಹುಳಿಯನ್ನು ತೆಗೆದುಹಾಕಿರಿ. ನೀವು ಹುಳಿಯಿಲ್ಲದವರಾಗಿದ್ದೀರಲ್ಲ. ಏಕೆಂದರೆ ನಮ್ಮ ಪಸ್ಕದ ಕುರಿಯಾದ ಕ್ರಿಸ್ತ ಯೇಸು ಯಜ್ಞಾರ್ಪಿತನಾಗಿದ್ದಾರೆ.
8ಆದಕಾರಣ ಹಗೆತನ, ದುಷ್ಟತನ, ಎಂಬ ಹಳೇ ಹುಳಿಯಿಂದಲ್ಲ, ಯಥಾರ್ಥತೆ ಹಾಗೂ ಸತ್ಯ ಎಂಬ ಹುಳಿಯಿಲ್ಲದ ರೊಟ್ಟಿಯಿಂದಲೇ ಹಬ್ಬವನ್ನು ಆಚರಿಸೋಣ.
9ಅನೈತಿಕರೊಡನೆ ಸಹವಾಸ ಮಾಡಬಾರದೆಂದು ನಾನು ಪತ್ರದಲ್ಲಿ ಬರೆದಿದ್ದೆನಷ್ಟೆ.
10ಈ ಲೋಕದಲ್ಲಿರುವ ಎಲ್ಲಾ ಅನೈತಿಕರು, ಲೋಭಿಗಳು, ಸುಲಿಗೆ ಮಾಡುವವರು, ವಿಗ್ರಹಾರಾಧಕರು ಇಂಥವರ ಸಹವಾಸವನ್ನು ನೀವು ಬಿಟ್ಟು ಇರಬೇಕೆಂಬುದು ನನ್ನ ಅರ್ಥವಲ್ಲ. ಹಾಗಿದ್ದರೆ, ನೀವು ಈ ಲೋಕವನ್ನೇ ಬಿಟ್ಟು ಹೋಗಬೇಕಾಗುವುದು.
11ಆದರೆ ಸಹೋದರಿ ಅಥವಾ ಸಹೋದರನೆನಿಸಿಕೊಂಡವನು ಜಾರನಾದರೂ ಲೋಭಿಯಾದರೂ ವಿಗ್ರಹಾರಾಧಕನಾದರೂ ಪರನಿಂದಕನಾದರೂ ಕುಡುಕನಾದರೂ ಸುಲಿಗೆ ಮಾಡುವವನಾದರೂ ಆಗಿದ್ದರೆ, ಅಂಥವರ ಸಹವಾಸ ಮಾಡಬೇಡಿರಿ. ಅಂಥವರ ಸಂಗಡ ಊಟ ಮಾಡಲೂ ಬೇಡಿರಿ ಎಂದು ಈಗ ಬರೆಯುತ್ತಿದ್ದೇನೆ.
12ಸಭೆಗೆ ಸೇರದಿರುವ ಹೊರಗಿನವರನ್ನು ತೀರ್ಪುಮಾಡುವುದಕ್ಕೆ ನಾನು ಯಾರು? ಸಭೆಯ ಒಳಗಿನವರನ್ನು ತೀರ್ಪುಮಾಡಬೇಕಾದವರು ನೀವಲ್ಲವೇ?
13ಆದರೆ ಹೊರಗಿನವರನ್ನು ತೀರ್ಪುಮಾಡುವವರು ದೇವರೇ. “ಆ ದುಷ್ಟನನ್ನು ನಿಮ್ಮಿಂದ ತೆಗೆದು ಹೊರಗೆ ಹಾಕಿರಿ.”
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.