Corinthian believers collecting gifts, packing provisions, and greeting a diverse group of ministry coworkers

1 ಕೊರಿಂಥದವರಿಗೆ 16

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಪೌಲನು ಯೆರೂಸಲೇಮಿಗಾಗಿ ವಾರದ ಸಂಗ್ರಹಕ್ಕೆ ಪ್ರಾಯೋಗಿಕ ಸೂಚನೆಗಳನ್ನು ನೀಡಿ ಪ್ರಯಾಣದ ಯೋಜನೆಗಳು, ತೆರೆದ ಸೇವೆಯ ಅವಕಾಶಗಳು ಮತ್ತು ನಂಬಿಕೆಯ ಸಹಕಾರ್ಯಕರ್ತರ ಬಗ್ಗೆ ಚರ್ಚಿಸುತ್ತಾನೆ. ಎಚ್ಚರಿಕೆ, ಧೈರ್ಯ, ಬಲ ಮತ್ತು ಎಲ್ಲವನ್ನೂ ಪ್ರೀತಿಯಲ್ಲಿ ಮಾಡುವಂತೆ ಒತ್ತಾಯಿಸಿ ಮುಕ್ತಾಯಗೊಳಿಸುತ್ತಾನೆ.
ಸಂಗ್ರಹಸೇವಾಕಾರ್ಯದ ಸಹಭಾಗಿತ್ವಧೈರ್ಯಪ್ರೀತಿ
1ಈಗ ದೇವಜನರಿಗೋಸ್ಕರ ಹಣ ಕೂಡಿಸಿಡುವುದನ್ನು ಕುರಿತು: ನಾನು ಗಲಾತ್ಯದ ಸಭೆಗಳಿಗೆ ಹೇಳಿದ್ದನ್ನೇ ನೀವೂ ಮಾಡಿರಿ.
2ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಆದಾಯಕ್ಕೆ ತಕ್ಕಂತೆ ವಾರದ ಮೊದಲನೆಯ ದಿನದಲ್ಲಿ ಕೂಡಿಟ್ಟುಕೊಂಡಿರಲಿ. ಹೀಗೆ ಮಾಡಿದರೆ, ನಾನು ಬಂದಾಗ ನೀವು ಹಣ ಕೂಡಿಸುವ ಅವಶ್ಯವಿರುವುದಿಲ್ಲ.
3ನಾನು ನಿಮ್ಮಲ್ಲಿಗೆ ಬಂದಾಗ, ನೀವು ಯಾರನ್ನು ಅನುಮೋದಿಸುವಿರೋ, ಅವರಿಗೆ ಪತ್ರ ಕೊಟ್ಟು ನಿಮ್ಮ ಕೊಡುಗೆಯನ್ನು ತೆಗೆದುಕೊಂಡು ಯೆರೂಸಲೇಮಿಗೆ ಹೋಗುವಂತೆ ಕಳುಹಿಸುವೆನು.
4ನಾನು ಸಹ ಹೋಗುವುದು ಯುಕ್ತವಾಗಿದ್ದರೆ, ಅವರು ನನ್ನೊಂದಿಗೆ ಬರಲಿ.
5ಮಕೆದೋನ್ಯವನ್ನು ದಾಟಿದ ಮೇಲೆ, ಅದೇ ಮಾರ್ಗವಾಗಿ ನಾನು ಪುನಃ ನಿಮ್ಮ ಬಳಿಗೆ ಬರುವೆನು.
6ಬಹುಶಃ ನಾನು ಸ್ವಲ್ಪ ಸಮಯ ನಿಮ್ಮೊಂದಿಗೆ ಇದ್ದ ಮೇಲೆ ಅಥವಾ ಚಳಿಗಾಲವನ್ನು ಪೂರ್ತಿಯಾಗಿ ನಿಮ್ಮೊಂದಿಗೆ ಕಳೆಯಲು ಬಯಸುತ್ತೇನೆ. ಹೀಗೆ ನಾನು ಹೋಗಬೇಕಾದ ಸ್ಥಳಗಳಲ್ಲಿ ನೀವು ನನಗೆ ಸಹಾಯ ಮಾಡಬಹುದು.
7ನಾನು ಹಾದುಹೋಗುವಾಗ, ನಿಮ್ಮನ್ನು ಸ್ವಲ್ಪ ಸಮಯ ಮಾತ್ರ ಸಂದರ್ಶಿಸುವುದಕ್ಕೆ ನನಗೆ ಇಷ್ಟವಿಲ್ಲ. ಕರ್ತನು ಅನುಮತಿಸಿದರೆ, ನಿಮ್ಮ ಬಳಿಯಲ್ಲಿ ಬಂದು ಹೆಚ್ಚುಕಾಲ ಇರುವೆನೆಂದು ನಿರೀಕ್ಷಿಸುತ್ತೇನೆ.
8ಆದರೆ ಐವತ್ತು ದಿನಗಳ ಹಬ್ಬದ ತನಕ ಎಫೆಸದಲ್ಲಿರುವೆನು.
9ಏಕೆಂದರೆ, ಪರಿಣಾಮಕಾರಿಯಾದ ಸೇವೆಗೆ ದೊಡ್ಡದಾಗಿ ಬಾಗಿಲು ನನಗೆ ತೆರೆದಿದೆ, ಬಹಳ ಜನ ವಿರೋಧಿಗಳೂ ಇದ್ದಾರೆ.
10ನನ್ನ ಹಾಗೆಯೇ ತಿಮೊಥೆ ಕರ್ತನ ಸೇವೆ ಮಾಡುತ್ತಿದ್ದಾನೆ. ಅವನು ಬಂದರೆ, ಅವನು ನಿಮ್ಮೊಂದಿಗಿರುವಾಗ ಅವನಿಗೆ ಯಾವ ಭಯವೂ ಇಲ್ಲದಂತೆ ನೋಡಿಕೊಳ್ಳಿರಿ.
11ಯಾರೂ ಅವನನ್ನು ಹೀನಾಯವಾಗಿ ಕಾಣಬಾರದು. ಆದರೆ ಅವನು ನನ್ನ ಬಳಿಗೆ ಬರುವಂತೆ ಅವನನ್ನು ಸಮಾಧಾನದಿಂದ ಕಳುಹಿಸಿಕೊಡಿರಿ. ಅವನು ಸಹೋದರರೊಂದಿಗೆ ಬರುವುದನ್ನು ಎದುರು ನೋಡುತ್ತಿದ್ದೇನೆ.
12ಈಗ ನಮ್ಮ ಸಹೋದರನಾದ ಅಪೊಲ್ಲೋಸನ ವಿಷಯವೇನೆಂದರೆ, ಅವನು ಇತರ ಸಹೋದರರೊಂದಿಗೆ ನಿಮ್ಮ ಬಳಿಗೆ ಬರಬೇಕೆಂದು ಅವನಿಗೆ ಬಹಳವಾಗಿ ಕೇಳಿಕೊಂಡೆನು. ಆದರೆ ಈಗ ಬರುವುದಕ್ಕೆ ಅವನಿಗೆ ಸ್ವಲ್ಪವೂ ಮನಸ್ಸಿಲ್ಲ. ಅವನು ತನಗೆ ಸಂದರ್ಭ ಸಿಕ್ಕಿದಾಗ ಬರುವನು.
13ಎಚ್ಚರವಾಗಿರಿ, ವಿಶ್ವಾಸದಲ್ಲಿ ಸ್ಥಿರವಾಗಿ ನಿಲ್ಲಿರಿ, ಧೈರ್ಯವಾಗಿರಿ, ಬಲಗೊಳ್ಳಿರಿ.
14ನೀವು ಮಾಡುವುದನ್ನೆಲ್ಲಾ ಪ್ರೀತಿಯಿಂದ ಮಾಡಿರಿ.
15ಸ್ತೆಫನನ ಕುಟುಂಬದವರು ಅಖಾಯದಲ್ಲಿ ಪ್ರಥಮವಾಗಿ ವಿಶ್ವಾಸಿಗಳಾದವರು ಎಂಬುದನ್ನು ನೀವು ಬಲ್ಲಿರಿ. ಅವರು ದೇವಜನರಿಗೆ ಸೇವೆ ಮಾಡುವುದಕ್ಕಾಗಿ ತಮ್ಮನ್ನೇ ಸಮರ್ಪಿಸಿಕೊಂಡವರಾಗಿದ್ದಾರೆ.
16ಪ್ರಿಯರೇ, ನೀವು ಇಂಥವರಿಗೂ ಈ ಸೇವೆಯಲ್ಲಿ ಅವರೊಂದಿಗೆ ಪ್ರಯಾಸಪಡುವವರಿಗೂ ವಿಧೇಯರಾಗಿರಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
17ಸ್ತೆಫನನೂ ಫೊರ್ತುನಾತನೂ ಅಖಾಯಿಕನೂ ಬಂದುದರಿಂದ ನನಗೆ ಸಂತೋಷವಾಯಿತು. ನೀವಿಲ್ಲದ್ದ ಕೊರತೆಯನ್ನು ಅವರು ನನಗೆ ಒದಗಿಸಿದ್ದಾರೆ.
18ಅವರು ನನ್ನ ಆತ್ಮವನ್ನೂ, ನಿಮ್ಮ ಆತ್ಮಗಳನ್ನೂ ಉಪಶಮನ ಮಾಡಿದರು. ನೀವು ಇಂಥವರನ್ನು ಸನ್ಮಾನಿಸಿರಿ.
19ಏಷ್ಯಾದ ಸೀಮೆಯ ಸಭೆಗಳವರು ನಿಮ್ಮನ್ನು ವಂದಿಸುತ್ತಾರೆ. ಅಕ್ವಿಲನೂ ಮತ್ತು ಪ್ರಿಸ್ಕಳೂ ತಮ್ಮ ಮನೆಯಲ್ಲಿ ಕೂಡುವ ಸಭೆಯವರೊಂದಿಗೆ ಕರ್ತನ ಹೆಸರಿನಲ್ಲಿ ನಿಮ್ಮನ್ನು ಹೃದಯಪೂರ್ವಕವಾಗಿ ವಂದಿಸುತ್ತಾರೆ.
20ಸಹೋದರರೆಲ್ಲರೂ ನಿಮ್ಮನ್ನು ವಂದಿಸುತ್ತಾರೆ. ಪವಿತ್ರವಾದ ಮುದ್ದಿಟ್ಟು, ಒಬ್ಬರನ್ನೊಬ್ಬರು ವಂದಿಸಿರಿ.
21ಪೌಲನೆಂಬ ನಾನು, ಸ್ವಂತ ಕೈಯಿಂದ ಈ ವಂದನೆಯನ್ನು ಬರೆದಿದ್ದೇನೆ.
22ಯಾವನಾದರೂ ಕರ್ತನನ್ನು ಪ್ರೀತಿಸದಿದ್ದರೆ, ಅವನು ಶಾಪಗ್ರಸ್ತನಾಗಲಿ! ಕರ್ತನೇ, ಬಾ!
23ಕರ್ತ ಆಗಿರುವ ಯೇಸುಕ್ರಿಸ್ತರ ಕೃಪೆಯು ನಿಮ್ಮೊಂದಿಗಿರಲಿ.
24ಕ್ರಿಸ್ತ ಯೇಸುವಿನಲ್ಲಿ ನನ್ನ ಪ್ರೀತಿಯು ನಿಮ್ಮೆಲ್ಲರೊಂದಿಗೆ ಇದೆ. ಆಮೆನ್.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.