Believers caring for an elder, reconciling friends, sharing food, and protecting a child beside a bronze mirror

1 ಕೊರಿಂಥದವರಿಗೆ 13

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಅಸಾಧಾರಣ ಮಾತು, ಜ್ಞಾನ, ನಂಬಿಕೆ ಮತ್ತು ಉದಾರತೆಯೂ ಪ್ರೀತಿಯಿಲ್ಲದೆ ಏನೂ ಅಲ್ಲ. ಪ್ರೀತಿಯು ತಾಳ್ಮೆಯಿಂದಲೂ ನಿಸ್ವಾರ್ಥವಾಗಿಯೂ ವರ್ತಿಸಿ, ಅಪೂರ್ಣ ವರಗಳನ್ನು ಮೀರಿ ಉಳಿದು, ವಿಶ್ವಾಸಿಗಳನ್ನು ಮಂದ ಗ್ರಹಿಕೆಯಿಂದ ಪ್ರೌಢ, ಶಾಶ್ವತ ತಿಳುವಳಿಕೆಯ ಕಡೆಗೆ ಚಲಿಸುತ್ತದೆ.
ಪ್ರೀತಿತಾಳ್ಮೆಪ್ರೌಢತೆಸಹನೆ
1ನಾನು ಮನುಷ್ಯರ ಭಾಷೆಗಳನ್ನೂ, ದೇವದೂತರ ಭಾಷೆಗಳನ್ನೂ ಮಾತನಾಡುವವನಾದರೂ ನನಗೆ ಪ್ರೀತಿಯಿಲ್ಲದಿದ್ದರೆ, ನಾದ ಕೊಡುವ ಕಂಚೂ ಗಣಗಣಿಸುವ ತಾಳವೂ ಆಗಿದ್ದೇನೆ.
2ನನಗೆ ಪ್ರವಾದನ ವರವಿದ್ದರೂ ನಾನು ಎಲ್ಲಾ ರಹಸ್ಯಗಳನ್ನೂ, ಸಕಲ ವಿದ್ಯೆಯನ್ನು ತಿಳಿದಿದ್ದರೂ ಬೆಟ್ಟಗಳನ್ನು ಕದಲಿಸುವಷ್ಟು ನಂಬಿಕೆಯಿದ್ದರೂ ನನಗೆ ಪ್ರೀತಿಯಿಲ್ಲದಿದ್ದರೆ, ಶೂನ್ಯನಾಗಿದ್ದೇನೆ.
3ನಾನು ನನ್ನ ಎಲ್ಲಾ ಆಸ್ತಿಯನ್ನು ದಾನಮಾಡಿದರೂ, ನಾನು ಹೊಗಳಿಕೊಳ್ಳುವಂತೆ ನನ್ನ ದೇಹವನ್ನು ಸುಡುವುದಕ್ಕಾಗಿ ಒಪ್ಪಿಸಿಕೊಟ್ಟರೂ ಪ್ರೀತಿಯು ನನಗಿಲ್ಲದಿದ್ದರೆ, ನನಗೇನೂ ಪ್ರಯೋಜನವಾಗುವುದಿಲ್ಲ.
4ಪ್ರೀತಿ ತಾಳ್ಮೆಯುಳ್ಳದ್ದು, ಪ್ರೀತಿ ದಯೆಯುಳ್ಳದ್ದು, ಪ್ರೀತಿ ಅಸೂಯೆಪಡುವುದಿಲ್ಲ, ಪ್ರೀತಿ ಹೊಗಳಿಕೊಳ್ಳುವುದಿಲ್ಲ, ಗರ್ವಪಡುವುದಿಲ್ಲ,
5ಪ್ರೀತಿಯು ಇತರರನ್ನು ಅವಮಾನಪಡಿಸುವುದಿಲ್ಲ, ಸ್ವಹಿತವನ್ನೇ ಹುಡುಕುವುದಿಲ್ಲ, ಸುಲಭವಾಗಿ ಸಿಟ್ಟುಗೊಳ್ಳುವುದಿಲ್ಲ, ಅಪಕಾರವನ್ನು ಎಣಿಸುವುದಿಲ್ಲ,
6ಪ್ರೀತಿ ಕೆಟ್ಟದ್ದರಲ್ಲಿ ಸಂತೋಷಪಡುವುದಿಲ್ಲ, ಸತ್ಯದೊಂದಿಗೆ ಸಂತೋಷ ಪಡುತ್ತದೆ.
7ಯಾವಾಗಲೂ ಸಂರಕ್ಷಿಸುತ್ತದೆ, ಯಾವಾಗಲೂ ನಂಬುತ್ತದೆ, ಯಾವಾಗಲೂ ನಿರೀಕ್ಷಿಸುತ್ತದೆ, ಯಾವಾಗಲೂ ಸಹಿಸಿಕೊಳ್ಳುತ್ತದೆ.
8ಪ್ರೀತಿಯು ಎಂದಿಗೂ ಅಳಿದುಹೋಗುವುದಿಲ್ಲ, ಪ್ರವಾದನೆಗಳಾದರೋ ಇಲ್ಲದಂತಾಗುವುವು, ಅನ್ಯ ಭಾಷೆಗಳು ಗತಿಸಿ ಹೋಗುವುವು, ವಿದ್ಯೆಯೋ ಇಲ್ಲದಂತಾಗುವುವು.
9ನಾವು ಅಪೂರ್ಣವಾಗಿ ತಿಳಿದುಕೊಂಡಿದ್ದೇವೆ, ಅಪೂರ್ಣವಾಗಿ ಪ್ರವಾದಿಸುತ್ತೇವೆ.
10ಆದರೆ ಸಂಪೂರ್ಣವಾದದ್ದು ಬಂದಾಗ, ಭಾಗವಾದದ್ದು ಅಳಿದುಹೋಗುವುದು.
11ನಾನು ಬಾಲಕನಾಗಿದ್ದಾಗ, ಬಾಲಕನ ಮಾತುಗಳನ್ನಾಡಿದೆನು, ಬಾಲಕನಂತೆ ಯೋಚಿಸಿದೆನು, ಬಾಲಕನಂತೆಯೇ ತರ್ಕಿಸಿದೆನು. ಪ್ರೌಢನಾದಾಗ ಬಾಲ್ಯದವುಗಳನ್ನು ಬಿಟ್ಟುಬಿಟ್ಟೆನು.
12ಈಗ ನಾವು ಕನ್ನಡಿಯಲ್ಲಿ ಮೊಬ್ಬಾಗಿ ನೋಡುತ್ತೇವೆ. ಆಗ ಮುಖಾಮುಖಿಯಾಗಿ ನೋಡುವೆವು. ಈಗ ಸ್ವಲ್ಪ ಮಾತ್ರ ನನಗೆ ತಿಳಿದಿದೆ. ಆಗ ದೇವರು ನನ್ನನ್ನು ಸಂಪೂರ್ಣವಾಗಿ ತಿಳಿದುಕೊಂಡಂತೆ, ನಾನು ಸಂಪೂರ್ಣವಾಗಿ ತಿಳಿದುಕೊಳ್ಳುವೆನು.
13ಆದರೆ ಈಗ ನಂಬಿಕೆ, ನಿರೀಕ್ಷೆ, ಪ್ರೀತಿ, ಈ ಮೂರೇ ಉಳಿದಿರುತ್ತವೆ. ಇವುಗಳಲ್ಲಿ ಮಹತ್ತಾದದ್ದು ಪ್ರೀತಿಯೇ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.