A diverse house church praying and speaking as all gather around one loaf and one cup

1 ಕೊರಿಂಥದವರಿಗೆ 11

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಪೌಲನು ಆರಾಧನೆಯಲ್ಲಿ ಸ್ತ್ರೀಪುರುಷರ ಸಾಂಸ್ಕೃತಿಕವಾಗಿ ಗೌರವಾನ್ವಿತ ಭಾಗವಹಿಸುವಿಕೆಯನ್ನು ಸಂಬೋಧಿಸಿ, ನಂತರ ಕರ್ತನ ಭೋಜನದಲ್ಲಿ ಅವಮಾನಕರ ಅಸಮಾನತೆಯನ್ನು ಎದುರಿಸುತ್ತಾನೆ. ಯೇಸುವನ್ನು ನೆನಪಿಸಿಕೊಳ್ಳುವುದಕ್ಕೆ ಆತ್ಮಪರೀಕ್ಷೆ, ವಿವೇಚನೆ ಮತ್ತು ಇಡೀ ದೇಹಕ್ಕೆ ಸ್ಥಳ ಮಾಡುವುದು ಅಗತ್ಯ.
ಆರಾಧನೆಪರಸ್ಪರ ಗೌರವಕರ್ತನ ಭೋಜನಆತ್ಮಪರೀಕ್ಷೆ
1ನಾನು ಕ್ರಿಸ್ತ ಯೇಸುವನ್ನು ಅನುಸರಿಸುವಂತೆಯೇ, ನೀವೂ ನನ್ನನ್ನು ಅನುಸರಿಸಿರಿ.
2ನೀವು ಎಲ್ಲದರಲ್ಲಿಯೂ ನನ್ನನ್ನು ಜ್ಞಾಪಕಮಾಡಿಕೊಂಡು, ನಾನು ನಿಮಗೆ ಒಪ್ಪಿಸಿಕೊಟ್ಟ ಉಪದೇಶಗಳನ್ನು ಬಿಗಿಯಾಗಿ ಅನುಸರಿಸುತ್ತಿರೆಂದು ನಿಮ್ಮನ್ನು ಹೊಗಳುತ್ತೇನೆ.
3ಪ್ರತಿ ಪುರುಷನಿಗೂ ಕ್ರಿಸ್ತನು ಶಿರಸ್ಸು, ಸ್ತ್ರೀಗೆ ಪುರುಷನು ಶಿರಸ್ಸು ಮತ್ತು ಕ್ರಿಸ್ತನಿಗೆ ದೇವರು ಶಿರಸ್ಸಾಗಿದ್ದಾರೆ, ಎಂಬುದನ್ನು ನೀವು ತಿಳಿಯಬೇಕೆಂಬುದು ನನ್ನ ಅಪೇಕ್ಷೆ.
4ತನ್ನ ತಲೆಯನ್ನು ಮುಚ್ಚಿಕೊಂಡು ಪ್ರಾರ್ಥನೆ ಮಾಡುವ ಇಲ್ಲವೆ, ಪ್ರವಾದನೆ ಹೇಳುವ ಪ್ರತಿ ಪುರುಷನೂ ತನ್ನ ತಲೆಯನ್ನು ಅವಮಾನಪಡಿಸುತ್ತಾನೆ.
5ಆದರೆ ತಲೆಯ ಮೇಲೆ ಮುಸುಕು ಹಾಕಿಕೊಳ್ಳದೆ ಪ್ರಾರ್ಥನೆ ಮಾಡುವ ಇಲ್ಲವೆ ಪ್ರವಾದನೆ ಹೇಳುವ ಪ್ರತಿ ಸ್ತ್ರೀಯು ತನ್ನ ತಲೆಯನ್ನು ಅವಮಾನ ಪಡಿಸುತ್ತಾಳೆ. ಹೀಗೆ ಮಾಡುವ ಸ್ತ್ರೀಯು ತನ್ನ ತಲೆ ಬೋಳಿಸಿಕೊಳ್ಳುವುದಕ್ಕೆ ಸಮಾನವಾಗಿದೆ.
6ಸ್ತ್ರೀಯು ಮುಸುಕು ಹಾಕಿಕೊಳ್ಳದೆ ಇದ್ದರೆ, ಆಕೆಯು ಕೂದಲನ್ನು ಕತ್ತರಿಸಿಕೊಳ್ಳಲಿ. ಕೂದಲನ್ನು ಕತ್ತರಿಸಿಕೊಳ್ಳುವುದಾಗಲಿ, ತಲೆ ಬೋಳಿಸಿಕೊಳ್ಳವುದಾಗಲಿ ಸ್ತ್ರೀಗೆ ಅವಮಾನಕರವಾಗಿದ್ದರೆ, ಆಕೆಯು ಮುಸುಕನ್ನು ಹಾಕಿಕೊಳ್ಳಬೇಕು.
7ಪುರುಷನು ದೇವರ ಸ್ವರೂಪವೂ ಮಹಿಮೆಯೂ ಆಗಿರುವುದರಿಂದ, ತನ್ನ ತಲೆಗೆ ಮುಸುಕು ಹಾಕಬೇಕಾಗಿಲ್ಲ. ಆದರೆ ಸ್ತ್ರೀಯು ಪುರುಷನ ಮಹಿಮೆಯಾಗಿದ್ದಾಳೆ.
8ಏಕೆಂದರೆ, ಪುರುಷನು ಸ್ತ್ರೀಯಿಂದಲ್ಲ, ಆದರೆ ಸ್ತ್ರೀಯು ಪುರುಷನಿಂದ ಉತ್ಪತ್ತಿಯಾದಳು.
9ಪುರುಷನು ಸ್ತ್ರೀಗಾಗಿ ಸೃಷ್ಟಿಯಾಗಲಿಲ್ಲ, ಸ್ತ್ರೀಯು ಪುರುಷನಿಗಾಗಿ ಸೃಷ್ಟಿಯಾದಳು.
10ಈ ಕಾರಣದಿಂದಲೂ ದೇವದೂತರ ನಿಮಿತ್ತವಾಗಿಯೂ ಸ್ತ್ರೀಯ ತಲೆಯ ಮೇಲೆ ಅಧಿಕಾರದ ಮುಸುಕನ್ನು ಹಾಕಿರಬೇಕು.
11ಆದರೂ, ಕರ್ತ ದೇವರಲ್ಲಿ ಪುರುಷನಿಲ್ಲದೆ ಸ್ತ್ರೀಯು ಇಲ್ಲ; ಸ್ತ್ರೀಯಿಲ್ಲದ ಪುರುಷನೂ ಇಲ್ಲ.
12ಏಕೆಂದರೆ ಸ್ತ್ರೀಯು ಪುರುಷನಿಂದ ಉತ್ಪತ್ತಿಯಾದಂತೆ, ಪುರುಷನು ಸ್ತ್ರೀಯಿಂದ ಜನಿಸುತ್ತಾನೆ. ಆದರೆ ಸಮಸ್ತವೂ ದೇವರಿಂದಲೇ ಆಗಿರುತ್ತದೆ.
13ಇದನ್ನು ನೀವೇ ತೀರ್ಮಾನ ಮಾಡಿಕೊಳ್ಳಿರಿ: ಸ್ತ್ರೀಯು ಮುಸುಕಿಲ್ಲದೆ ದೇವರಿಗೆ ಪ್ರಾರ್ಥಿಸುವುದು ಯುಕ್ತವೋ?
14ಪುರುಷನು ಕೂದಲನ್ನು ಬೆಳೆಸಿಕೊಂಡರೆ, ಅದು ಅವನಿಗೆ ಅವಮಾನಕರವಾಗಿದೆಯೆಂದೂ
15ಸ್ತ್ರೀಯು ಕೂದಲು ಬೆಳೆಸಿಕೊಂಡರೆ, ಅದು ಅವಳಿಗೆ ಮಹಿಮೆಯಾಗಿದೆಯೆಂದೂ ಪ್ರಕೃತಿಯೇ ಸ್ಪಷ್ಟಪಡಿಸುತ್ತದೆ ಅಲ್ಲವೇ? ಏಕೆಂದರೆ, ಅವಳಿಗೆ ಉದ್ದ ಕೂದಲು ಮುಸುಕಿನಂತೆ ಕೊಡಲಾಗಿದೆ.
16ಇದರ ಬಗ್ಗೆ ಯಾರಿಗಾದರೂ ವಾಗ್ವಾದ ಮಾಡಬಯಸಿದರೆ, ಇಂಥ ಪದ್ಧತಿ ನಮ್ಮಲ್ಲಿಲ್ಲ, ದೇವರ ಸಭೆಗಳಲ್ಲಿಯೂ ಇಲ್ಲ.
17ನಿಮ್ಮನ್ನು ಹೊಗಳುವುದಕ್ಕಾಗಿ ಈ ಮಾರ್ಗದರ್ಶನಗಳನ್ನು ನಾನು ನಿಮಗೆ ತಿಳಿಸುತ್ತಾಯಿಲ್ಲ. ಏಕೆಂದರೆ, ನಿಮ್ಮ ಕೂಟಗಳಿಂದ ಮೇಲಾಗುವುದಕ್ಕಿಂತ ಹೆಚ್ಚು ಕೇಡಾಗುತ್ತಲಿದೆ.
18ಹೇಗೆಂದರೆ, ಮೊದಲನೆಯದು: ನೀವು ಸಭೆಯಾಗಿ ಕೂಡಿಬರುವಾಗ ನಿಮ್ಮೊಳಗೆ ಭೇದಗಳಿವೆ ಎಂದು ಕೇಳುತ್ತೇನೆ. ಇದನ್ನು ಸ್ವಲ್ಪಮಟ್ಟಿಗೆ ನಂಬುತ್ತೇನೆ.
19ದೇವರ ಮೆಚ್ಚುಗೆ ನಿಮ್ಮಲ್ಲಿ ಯಾರ ಮೇಲೆ ಇದೆ ಎಂಬುದು ಕಂಡುಬರುವಂತೆ ಭಿನ್ನಾಭಿಪ್ರಾಯಗಳು ಇರುವುದು ಅವಶ್ಯವೇ.
20ನೀವು ಒಟ್ಟಾಗಿ ಕೂಡಿಬರುವಾಗ, ನೀವು ಮಾಡುವ ಭೋಜನವು ಕರ್ತದೇವರ ಭೋಜನವಲ್ಲ.
21ಏಕೆಂದರೆ, ಭೋಜನ ಮಾಡುವಾಗ, ಪ್ರತಿಯೊಬ್ಬನು ಇತರರಿಗಾಗಿ ಕಾಯದೇ, ತನ್ನ ಭೋಜನವನ್ನು ಮುಂಚಿತವಾಗಿ ಆರಂಭಿಸುತ್ತಾನೆ. ಒಬ್ಬನು ಹಸಿದಿರುತ್ತಾನೆ, ಮತ್ತೊಬ್ಬನು ಕುಡಿದಿರುತ್ತಾನೆ.
22ಉಣ್ಣುವುದಕ್ಕೂ, ಕುಡಿಯುವುದಕ್ಕೂ ನಿಮಗೆ ಮನೆಗಳಿಲ್ಲವೇ? ಅಥವಾ ದೇವರ ಸಭೆಯನ್ನು ಹೀನೈಸಿ ಏನೂ ಇಲ್ಲದವರನ್ನು ನಾಚಿಕೆಪಡಿಸುತ್ತೀರಾ? ನಾನು ನಿಮಗೇನು ಹೇಳಲಿ? ಇದಕ್ಕಾಗಿ ನಾನು ನಿಮ್ಮನ್ನು ಹೊಗಳಬೇಕೆ? ಖಂಡಿತ ಇಲ್ಲ.
23ನಾನು ಕರ್ತ ದೇವರಿಂದಲೇ ಪಡೆದದ್ದನ್ನು ನಿಮಗೆ ಒಪ್ಪಿಸಿಕೊಟ್ಟಿದ್ದೇನೆ: ಕರ್ತ ಆಗಿರುವ ಯೇಸು ತಮ್ಮನ್ನು ಹಿಡಿದುಕೊಡಲಾದ ರಾತ್ರಿಯಲ್ಲಿ ರೊಟ್ಟಿಯನ್ನು ತೆಗೆದುಕೊಂಡು,
24ಸ್ತೋತ್ರಮಾಡಿ ಮುರಿದು, “ಇದು ನಿಮಗೋಸ್ಕರವಾಗಿರುವ ನನ್ನ ದೇಹ, ನನ್ನ ನೆನಪಿಗಾಗಿ ನೀವು ಇದನ್ನು ಮಾಡಿರಿ,” ಎಂದರು.
25ಅದೇ ಪ್ರಕಾರ, ಭೋಜನವಾದ ಮೇಲೆ ಪಾನಪಾತ್ರೆಯನ್ನು ತೆಗೆದುಕೊಂಡು, “ಈ ಪಾತ್ರೆಯು ನಿಮಗೋಸ್ಕರ ಸುರಿಸಲಾಗುವ, ನನ್ನ ರಕ್ತದಿಂದಾದ ಹೊಸ ಒಡಂಬಡಿಕೆಯಾಗಿದೆ. ನೀವು ಇದರಲ್ಲಿ ಪಾನಮಾಡುವಾಗೆಲ್ಲಾ ನನ್ನನ್ನು ಜ್ಞಾಪಿಸಿಕೊಳ್ಳುವದಕ್ಕೋಸ್ಕರ ಪಾನಮಾಡಿರಿ,” ಎಂದರು.
26ನೀವು ಈ ರೊಟ್ಟಿಯನ್ನು ತಿಂದು, ಈ ಪಾತ್ರೆಯಲ್ಲಿ ಪಾನಮಾಡುವಷ್ಟು ಸಾರಿ, ಕರ್ತದೇವರ ಮರಣವನ್ನು ಅವರು ಬರುವ ತನಕ ಪ್ರಸಿದ್ಧಿಪಡಿಸುತ್ತೀರಿ.
27ಹೀಗಿರುವುದರಿಂದ, ಯಾರಾದರೂ ಅಯೋಗ್ಯವಾಗಿ ಕರ್ತದೇವರ ರೊಟ್ಟಿಯನ್ನು ತಿಂದರೆ, ಇಲ್ಲವೆ ಅವರ ಪಾತ್ರೆಯಲ್ಲಿ ಪಾನ ಮಾಡಿದರೆ, ಅಂಥವರು ಕರ್ತದೇವರ ದೇಹಕ್ಕೂ, ರಕ್ತಕ್ಕೂ ದ್ರೋಹ ಮಾಡಿದವರಾಗಿರುವರು.
28ಆದರೆ ಪ್ರತಿಯೊಬ್ಬರೂ ತಮ್ಮನ್ನು ಪರೀಕ್ಷಿಸಿಕೊಂಡವರಾಗಿ, ಆ ರೊಟ್ಟಿಯನ್ನು ತೆಗೆದುಕೊಂಡು ತಿನ್ನಲಿ, ಆ ಪಾತ್ರೆಯಲ್ಲಿ ಕುಡಿಯಲಿ.
29ಏಕೆಂದರೆ, ಯಾರಾದರು ಕ್ರಿಸ್ತನ ದೇಹವೆಂದು ವಿವೇಚಿಸದೆ ತಿಂದು ಕುಡಿದರೆ, ಹಾಗೆ ತಿಂದು ಕುಡಿಯುವುದರಿಂದ ನ್ಯಾಯತೀರ್ಪಿಗೊಳಗಾಗುವರು.
30ಇದರಿಂದ ನಿಮ್ಮಲ್ಲಿ ಬಹುಮಂದಿ ಬಲಹೀನರೂ, ರೋಗಿಗಳೂ ಆಗಿದ್ದಾರೆ, ಕೆಲವರು ನಿದ್ರೆ ಹೋಗಿದ್ದಾರೆ.
31ನಮ್ಮನ್ನು ನಾವೇ ತೀರ್ಪುಮಾಡಿಕೊಂಡರೆ, ನಾವು ನ್ಯಾಯವಿಚಾರಣೆಗೆ ಒಳಗಾಗುವುದಿಲ್ಲ.
32ನಾವು ಲೋಕದವರ ಸಂಗಡ ದಂಡನೆಗೆ ಗುರಿಯಾಗಬಾರದೆಂದು, ದೇವರು ನಮ್ಮನ್ನು ಈಗ ಈ ರೀತಿಯಾಗಿ ಶಿಸ್ತಿನ ನ್ಯಾಯವಿಚಾರಣೆಗೆ ಒಳಪಡಿಸುತ್ತಾರೆ.
33ಹೀಗಿರುವುದರಿಂದ ನನ್ನ ಪ್ರಿಯರೇ, ನೀವು ಭೋಜನಕ್ಕಾಗಿ ಕೂಡಿಬರುವಾಗ ಎಲ್ಲರಿಗಾಗಿ ಕಾದುಕೊಂಡಿರಿ.
34ನೀವು ಒಟ್ಟಾಗಿ ಕೂಟಕ್ಕೆ ಸೇರಿಬರುವಾಗ, ನ್ಯಾಯತೀರ್ಪಿಗೆ ಒಳಗಾದಂತೆ, ಹಸಿದವರು ಮನೆಯಲ್ಲೇ ಊಟಮಾಡಲಿ. ಇನ್ನುಳಿದ ವಿಷಯಗಳನ್ನು ನಾನು ಬಂದಾಗ ಕ್ರಮಪಡಿಸುತ್ತೇನೆ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.