
1 ಪೂರ್ವಕಾಲ ವೃತ್ತಾಂತ 18
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ದಾವೀದನು ಸುತ್ತಲಿನ ಶತ್ರುಗಳನ್ನು ಸೋಲಿಸಿ ಪ್ರದೇಶದಾದ್ಯಂತ ನಿಯಂತ್ರಣವನ್ನು ಸ್ಥಾಪಿಸುತ್ತಾನೆ. ಕಪ್ಪ ಮತ್ತು ವಶಪಡಿಸಿಕೊಂಡ ಲೋಹಗಳನ್ನು ದೇವರಿಗೆ ಅರ್ಪಿಸಲಾಗುತ್ತದೆ, ಕ್ರಮಬದ್ಧ ಆಡಳಿತವು ವಿಸ್ತರಿಸುತ್ತಿರುವ ರಾಜ್ಯದಾದ್ಯಂತ ನ್ಯಾಯ ಮತ್ತು ಸ್ಥಿರತೆಯನ್ನು ಬೆಂಬಲಿಸುತ್ತದೆ.
ವಿಜಯಸಮರ್ಪಣೆನ್ಯಾಯಆಡಳಿತ
1ಇದರ ತರುವಾಯ ದಾವೀದನು ಫಿಲಿಷ್ಟಿಯರ ಮೇಲೆ ದಾಳಿಮಾಡಿ ಅವರನ್ನು ಸೋಲಿಸಿ, ಅವರಿಂದ ಗತ್ ಪಟ್ಟಣವನ್ನೂ ಅದರ ಸುತ್ತಲಿನ ಗ್ರಾಮಗಳನ್ನೂ ತೆಗೆದುಕೊಂಡು, ಆಡಳಿತವನ್ನು ತನ್ನ ಸ್ವಾಧೀನದಲ್ಲಿಟ್ಟುಕೊಂಡನು.
2ಹಾಗೆಯೇ ಅವನು ಮೋವಾಬ್ಯರನ್ನು ಸಹ ಸೋಲಿಸಿದನು, ಮೋವಾಬ್ಯರು ದಾವೀದನಿಗೆ ಅಧೀನರಾಗಿ ಕಪ್ಪಕೊಡುವವರಾದರು.
3ಇದಲ್ಲದೆ ದಾವೀದನು ಯೂಫ್ರೇಟೀಸ್ ನದಿಯ ಬಳಿಯಲ್ಲಿ ತನ್ನ ಅಧಿಕಾರವನ್ನು ಸ್ಥಾಪಿಸುವದಕ್ಕೆ ಹೋಗುತ್ತಿರುವಾಗ, ಹಮಾತಿನ ಬಳಿಯಲ್ಲಿ ಚೋಬದ ಅರಸನಾದ ಹದದೆಜೆರನನ್ನು ಸೋಲಿಸಿದನು.
4ದಾವೀದನು ಅವನಿಂದ ಸಾವಿರ ರಥಗಳನ್ನೂ, ಏಳು ಸಾವಿರ ರಾಹುತರನ್ನೂ, ಇಪ್ಪತ್ತು ಸಾವಿರ ಕಾಲಾಳುಗಳನ್ನೂ ವಶಪಡಿಸಿಕೊಂಡನು. ನೂರು ರಥಗಳಿಗೆ ಕುದುರೆಗಳನ್ನು ಉಳಿಸಿ, ಇತರ ಕುದುರೆಗಳ ಕಾಲಿನ ನರಗಳನ್ನು ಕೊಯ್ಯಿಸಿಬಿಟ್ಟನು.
5ದಮಸ್ಕದ ಅರಾಮ್ಯರು ಚೋಬದ ಅರಸ ಹದದೆಜೆರನಿಗೆ ಸಹಾಯಮಾಡಲು ಬಂದಾಗ, ದಾವೀದನು ಅರಾಮ್ಯರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ಸಂಹರಿಸಿಬಿಟ್ಟನು.
6ತರುವಾಯ ದಾವೀದನು ದಮಸ್ಕದ ಅರಾಮಿನಲ್ಲಿ ಕಾವಲುದಂಡುಗಳನ್ನು ಇಟ್ಟನು. ಹೀಗೆ ಅರಾಮ್ಯರು ದಾವೀದನಿಗೆ ಅಧೀನರಾಗಿ, ಕಪ್ಪವನ್ನು ಕೊಡುವವರಾದರು. ದಾವೀದನು ಹೋದ ಸ್ಥಳಗಳಲ್ಲೆಲ್ಲಾ ಯೆಹೋವ ದೇವರು ಅವನಿಗೆ ಜಯಕೊಟ್ಟರು.
7ಆಗ ದಾವೀದನು ಹದದೆಜೆರನ ಸೇವಕರಿಗಿದ್ದ ಬಂಗಾರದ ಗುರಾಣಿಗಳನ್ನು ತೆಗೆದುಕೊಂಡು, ಅವುಗಳನ್ನು ಯೆರೂಸಲೇಮಿಗೆ ತಂದನು.
8ಇದಲ್ಲದೆ ಹದದೆಜೆರನ ಪಟ್ಟಣಗಳಾದ ಟಿಭತಿನಿಂದಲೂ, ಕೂನ್ದಿಂದಲೂ ದಾವೀದನು ಅತ್ಯಧಿಕವಾಗಿ ಕಂಚನ್ನು ತೆಗೆದುಕೊಂಡು ಬಂದನು. ಅದರಿಂದ ಸೊಲೊಮೋನನು ಕಂಚಿನ ಕೊಳವನ್ನೂ, ಸ್ತಂಭಗಳನ್ನೂ, ವಿವಿಧ ಪಾತ್ರೆಗಳನ್ನೂ ಮಾಡಿಸಿದನು.
9ದಾವೀದನು ಚೋಬದ ಅರಸನಾದ ಹದದೆಜೆರನ ಸಮಸ್ತ ಸೈನ್ಯವನ್ನು ಸೋಲಿಸಿದನೆಂಬ ವರ್ತಮಾನವನ್ನು ಹಮಾತಿನ ಅರಸನಾದ ತೋವು ಕೇಳಿದಾಗ,
10ಅರಸನಾದ ದಾವೀದನ ಕ್ಷೇಮಸಮಾಚಾರವನ್ನು ವಿಚಾರಿಸಲೂ, ಹದದೆಜೆರನ ವಿರುದ್ಧ ಯುದ್ಧಮಾಡಿ ಅವನನ್ನು ಸೋಲಿಸಿದ್ದಕ್ಕಾಗಿ ಅವನನ್ನು ಅಭಿನಂದಿಸಿ, ಹರಸುವಂತೆ, ತೋವು ತನ್ನ ಪುತ್ರನಾದ ಹದೋರಾಮನನ್ನು ಎಲ್ಲಾ ತರವಾದ ಬೆಳ್ಳಿ, ಬಂಗಾರ, ಕಂಚಿನ ಪಾತ್ರೆಗಳ ಸಹಿತವಾಗಿ ದಾವೀದನ ಬಳಿಗೆ ಕಳುಹಿಸಿದನು; ಏಕೆಂದರೆ ಹದದೆಜೆರನಿಗೆ ತೋವಿಯ ಸಂಗಡ ಯುದ್ಧಗಳಿದ್ದವು.
11ಇವುಗಳನ್ನು ಅರಸನಾದ ದಾವೀದನು ಎದೋಮ್ಯರು, ಮೋವಾಬ್ಯರು, ಅಮ್ಮೋನ್ಯರು, ಫಿಲಿಷ್ಟಿಯರು, ಅಮಾಲೇಕ್ಯರು ಎಂಬ ಸಕಲ ಜನಾಂಗಗಳ ಬಳಿಯಿಂದ ತೆಗೆದುಕೊಂಡು ಬಂದ ಬೆಳ್ಳಿಬಂಗಾರವನ್ನು ಯೆಹೋವ ದೇವರಿಗೆ ಪ್ರತಿಷ್ಠೆ ಮಾಡಿದನು.
12ಇದಲ್ಲದೆ ಚೆರೂಯಳ ಮಗ ಅಬೀಷೈಯನು ಉಪ್ಪಿನ ತಗ್ಗಿನಲ್ಲಿ ಹದಿನೆಂಟು ಸಾವಿರ ಎದೋಮ್ಯರ ಸೈನಿಕರನ್ನು ಕೊಂದನು.
13ಎದೋಮಿನಲ್ಲಿ ಕಾವಲುದಂಡುಗಳನ್ನು ಇಟ್ಟನು. ಇದರಿಂದ, ಎದೋಮ್ಯರೆಲ್ಲರು ದಾವೀದನಿಗೆ ಅಧೀನರಾದರು. ದಾವೀದನು ಹೋದಲ್ಲೆಲ್ಲಾ ಯೆಹೋವ ದೇವರು ಅವನಿಗೆ ಜಯಕೊಟ್ಟರು.
14ಹೀಗೆಯೇ ದಾವೀದನು ಸಮಸ್ತ ಇಸ್ರಾಯೇಲಿನ ಮೇಲೆ ಆಳುತ್ತಾ ತನ್ನ ಸಮಸ್ತ ಜನರಿಗೂ ನೀತಿ ನ್ಯಾಯಗಳಿಂದ ನಡೆಸುತ್ತಿದ್ದನು.
15ಚೆರೂಯಳ ಮಗ ಯೋವಾಬನು ಸೈನ್ಯದ ಅಧಿಪತಿಯಾಗಿದ್ದನು. ಅಹೀಲೂದನ ಮಗ ಯೆಹೋಷಾಫಾಟನು ಆಸ್ಥಾನದ ಆಗುಹೋಗುಗಳನ್ನು ದಾಖಲಿಸುವವನಾಗಿದ್ದನು.
16ಅಹೀಟೂಬನ ಮಗ ಚಾದೋಕನೂ, ಅಬಿಯಾತರನ ಮಗ ಅಹೀಮೆಲೆಕನೂ ಯಾಜಕರಾಗಿದ್ದರು. ಶವ್ಷನು ಕಾರ್ಯದರ್ಶಿಯಾಗಿದ್ದನು.
17ಯೆಹೋಯಾದಾವನ ಮಗ ಬೆನಾಯನು ಕೆರೇತ್ಯರ ಮೇಲೆಯೂ, ಪೆಲೇತ್ಯರ ಮೇಲೆಯೂ ಮುಖ್ಯಸ್ಥನಾಗಿದ್ದನು. ದಾವೀದನ ಪುತ್ರರು ಅರಸನ ಬಳಿಯಲ್ಲಿ ಪ್ರಧಾನರಾಗಿದ್ದರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.